🔘ನೋಟು ರದ್ದತಿಗೆ ವರ್ಷಪೂರ್ಣ; ಸಾಧಿಸಿದ್ದು ಏನು?,
ಬೆಂಗಳೂರು: ವರ್ಷದ ಹಿಂದೆ (ನವೆಂಬರ್ 8, 2016) ಪ್ರಧಾನಿ ನರೇಂದ್ರ ಮೋದಿ ಅವರು ಸಂಜೆ ಟೆಲಿವಿಷನ್‌ನಲ್ಲಿ ಯಾವುದೇ ಪೂರ್ವ ಸೂಚನೆ ಇಲ್ಲದೇ ದೇಶಬಾಂಧವರನ್ನು ಉದ್ದೇಶಿಸಿ ’ಬಾಹಿಂಯೊ ಔರ್ ಬೆಹೆನೊ... ಎಂದು ಮಾತು ಆರಂಭಿಸಿ ಗರಿಷ್ಠ ಮುಖಬೆಲೆಯ ₹ 500 ಮತ್ತು ₹ 1,000 ನೋಟುಗಳನ್ನು ರದ್ದುಪಡಿಸುತ್ತಿರುವುದಾಗಿ ಘೋಷಿಸುತ್ತಿದ್ದಂತೆ ಏ.ಸಿ ಕೋಣೆಯಲ್ಲಿ ಇದ್ದವರೂ ಬೆವರಲಾರಂಭಿಸಿದ್ದರು.
ಅಂದು ನಾನು ಕಾರ್ಯನಿಮಿತ್ಯ ಮುಂಬೈನಲ್ಲಿನ ಸಂಬಂಧಿಕರ ಮನೆಯಲ್ಲಿದ್ದೆ. ಟಿವಿಯಲ್ಲಿ ಸುದ್ದಿ ನೋಡುತ್ತಿದ್ದಂತೆ ಸಂಬಂಧಿಕರೊಬ್ಬರು ಸೋಫಾದಲ್ಲಿ ಕುಳಿತಲ್ಲಿಯೇ ಚಡಪಡಿಸತೊಡಗಿದ್ದರು.ಸ್ವಲ್ಪ ಹೊತ್ತಿನ ನಂತರ ಕುಟುಂಬದ ಸದಸ್ಯರೆಲ್ಲ ಸೇರಿ ಮೀನಿನ ಊಟ ಚಪ್ಪರಿಸಿ ತಿನ್ನುತ್ತಿದ್ದರೂ ಅವರಿಗೆ ಅದ್ಯಾವುದೂ ರುಚಿಸಿರಲಿಲ್ಲ. ಮ್ಲಾನವದನದವರಾಗಿ ಅರೆ ಮನಸ್ಸಿನಿಂದಲೇ ಊಟ ಮಾಡುತ್ತಿದ್ದರು. ಅವರ ಧ್ಯಾನವೆಲ್ಲ ಬೇರೆಲ್ಲೋ ನೆಟ್ಟಿತ್ತು. ತುತ್ತಿಗೊಂದು ನೀರು ಕುಡಿಯುತ್ತಿದ್ದರು. ‘ಛೇ ಹೀಗಾಯಿತಲ್ಲ, ಏನು ಮಾಡೋದು’ ಎಂದು ತಲೆಮೇಲೆ ಕೈಇಟ್ಟುಕೊಂಡು ಕುಳಿತಿದ್ದರು. ಇದು ಒಬ್ಬರ ಕತೆಯಲ್ಲ. ಅಂದು ಕೋಟ್ಯಂತರ ಭಾರತೀಯರ ಪರಿಸ್ಥಿತಿ ಇದೇ ಬಗೆಯಲ್ಲಿತ್ತು ಎಂದರೆ ಅತಿಶಯೋಕ್ತಿ ಎನಿಸದು. ವಿದೇಶದಲ್ಲಿ ದುಡಿಯುತ್ತಿದ್ದ ಸೋದರನ ಕೆಲ ಲಕ್ಷ ನಗದು ಅವರ ಮನೆಯಲ್ಲಿ ಇತ್ತು. ಅದನ್ನು ಹೇಗೆ ನಿರ್ವಹಿಸಬೇಕು ಎನ್ನುವುದು ಅವರ ಆ ಕ್ಷಣದ ತಲೆನೋವಾಗಿತ್ತು ಎಂಬುದು ಆನಂತರ ತಿಳಿದು ಬಂದಿತು.
ಮೋದಿ ಭಾಷಣ ಕೇಳುತ್ತಿರುವಾಗಲೇ ಅನೇಕರ ಮುಖ ಕಪ್ಪಿಟ್ಟ ತೊಡಗಿತ್ತು. ಭಾಷಣದ ಬೆನ್ನಲ್ಲೇ, ಟೆಲಿವಿಷನ್ ಚಾನೆಲ್‌ಗಳಲ್ಲಿ ದೀಢೀರನೆ ಚರ್ಚೆ ಸಂವಾದಗಳು ನಡೆಯತೊಡಗಿದ್ದವು. ಅಲ್ಪಾವಧಿಯಲ್ಲಿ ಈ ನಿರ್ಧಾರವು ಸಂಕಷ್ಟಗಳನ್ನು ತಂದೊಡ್ಡಲಿದ್ದರೂ, ದೀರ್ಘಾವಧಿಯಲ್ಲಿ ಇದರಿಂದ ಆರ್ಥಿಕತೆಗೆ ಒಳಿತಾಗಲಿದೆ ಎಂದೇ ಆರ್ಥಿಕ ಪರಿಣತರು ಅಭಿಪ್ರಾಯ ಮಂಡಿಸತೊಡಗಿದ್ದರು. ಈ ವಾದ ಒಪ್ಪದ ಇನ್ನೂ ಕೆಲವರು ಆರ್ಥಿಕತೆ ಮೇಲೆ ಅದರಿಂದಾಗಲಿರುವ ಗಂಭೀರ ಸ್ವರೂಪದ ಅಪಾಯಗಳನ್ನು ಪಟ್ಟಿ ಮಾಡತೊಡಗಿದ್ದರು. ಸತ್ಯ ಇವೆರೆಡರ ಮಧ್ಯೆ ಅಲ್ಲೆಲ್ಲೋ ಅಡಗಿತ್ತು.
ಗೃಹಿಣಿಯರು, ಚಿಲ್ಲರೆ, ಸಗಟು ವರ್ತಕರು, ರಿಯಲ್ ಎಸ್ಟೇಟ್ ವಹಿವಾಟುದಾರರು, ಕಾಳಧಣಿಕರು ಕುಂತಲ್ಲೇ ಚಡಪಡಿಸ ತೊಡಗಿದ್ದರು. ಉದ್ಯಮಿಗಳು, ರಾಜಕಾರಣಿಗಳೂ ಈ ನಿರ್ಧಾರದ ಲಾಭ ನಷ್ಟಗಳನ್ನು ಲೆಕ್ಕ ಹಾಕತೊಡಗಿದ್ದರು. ಗಂಡನ, ತೆರಿಗೆ ಅಧಿಕಾರಿಗಳ ಕಣ್ತಪ್ಪಿಸಿ ಕೂಡಿಟ್ಟ ಹಣವನ್ನು ಅನಿವಾರ್ಯವಾಗಿ ಹೊರತೆಗೆಯಬೇಕಾಗಿ ಬಂದಿರುವುದಕ್ಕೆ ಅನೇಕರ ಮುಖದಲ್ಲಿನ ನಗುವೇ ಮಾಯವಾಗಿತ್ತು.
‘ಅಯ್ಯೋ ದೇವರೆ, ಇದೆಲ್ಲ ಏನಾಯಿತು. ಕೂಡಿಟ್ಟಿದ್ದನ್ನು ಅರಗಿಸಿಕೊಳ್ಳುವುದು ಹೇಗೆ’ ಎನ್ನುವ ಆತಂಕದಿಂದಲೇ ಅನೇಕರು ನಿದ್ರಾದೇವಿಗೆ ಶರಣಾಗಲು ಹೋದರೂ ನಿದ್ದೆ ಹತ್ತಿರ ಸುಳಿಯಲಿಲ್ಲ. ಆಘಾತದಿಂದ ಹೊರ ಬರಲು ಕೆಲವರು ಮದಿರೆಯ ಮೊರೆ ಹೊಕ್ಕರೂ, ಮದ್ಯ ಇಳಿಯದ ಗಂಟಲಲ್ಲಿ ಹಳೆ ನೋಟುಗಳನ್ನೇ ತುರುಕಿದಂತಾಗಿ ಆಘಾತಗೊಂಡು ಏದುಸಿರು ಬಿಡುತ್ತಿದ್ದರು. ಕೆಟ್ಟ ಕನಸು ಬಿದ್ದವರಂತೆ ನಿದ್ದೆಯಲ್ಲಿಯೇ ಎದ್ದುಕುಳಿತುಕೊಂಡು ನಿಟ್ಟುಸಿರು ಬಿಡುತ್ತಿದ್ದರು. ವರ್ಷ ಕಳೆದರೂ ದೇಶಿ ಆರ್ಥಿಕತೆ ಕೂಡ ಇನ್ನೂ ಏದುಸಿರು ಬಿಡುತ್ತಲೇ ಇದೆ...
ಮೊನ್ನೆಯಷ್ಟೇ ಆಟೊ ಚಾಲಕನು ಹೇಳಿದ ಮಾತು ಒಟ್ಟಾರೆ ಈ ಬೆಳವಣಿಗೆಗೆ ಕನ್ನಡಿ ಹಿಡಿಯುತ್ತದೆ. ‘ಥೂ, ನೋಟು ರದ್ದಾಗಿ ನನ್ನ ವಹಿವಾಟೆಲ್ಲ ಹಾಳಾಯಿತು. ಮೋದಿ ಮಾಡಿದ ಎಡವಟ್ಟಿನಿಂದಾಗಿ ಚೇತರಿಸಿಕೊಳ್ಳಲು ಈಗಲೂ ಸಾಧ್ಯವಾಗಿಲ್ಲ ನೋಡ್ರಿ’ ಎಂದು ಬೇಸರಿಸಿಕೊಂಡೇ ಬೀಡಿಗೆ ಕಡ್ಡಿ ಗೀರಿದ.
ಒಂದು ವರ್ಷದ ನಂತರವೂ ಭಾರತೀಯ ರಿಸರ್ವ್ ಬ್ಯಾಂಕ್, ಬ್ಯಾಂಕ್‌ಗಳಿಗೆ ಕಟ್ಟಿದ ಹಳೆಯ ನೋಟುಗಳನ್ನು ಇನ್ನೂ ಎಣಿಸುತ್ತಲೇ ಇದೆ. ಈಗಲೂ ಸರಿಯಾದ ಲೆಕ್ಕ ಸಿಗುತ್ತಿಲ್ಲ ಎಂದು ಅಸಹಾಯಕತೆ ವ್ಯಕ್ತಪಡಿಸಿದೆ. ಇಂತಹ ಪುರುಷಾರ್ಥಕ್ಕೆ ನೋಟು ರದ್ದತಿ ಮಾಡಬೇಕಾಗಿತ್ತೇ ಎನ್ನುವ ಪ್ರಶ್ನೆ ಈಗಲೂ ಅನೇಕರನ್ನು ಕಾಡುತ್ತಿರುವುದು ಸುಳ್ಳಲ್ಲ.
ಕಳೆದ ವಾರ (ನವೆಂಬರ್ 1ರಂದು) ಸಂಬಳದ ಹಣ ಪಡೆಯಲು ಎಟಿಎಂಗೆ ಹೋದರೆ ಎರಡು ಸಾವಿರದ ನೋಟುಗಳೇ ಕೈಗೆ ಬಂದು ನನ್ನ ನೋಡಿ ಅಣಕಿಸಿದಂತೆ ಭಾಸವಾಯಿತು. ಇದೇನಿದು, ವರ್ಷವಾದರೂ ನೋಟುಗಳ ಬರ ನೀಗಿಲ್ಲವಲ್ಲ. ತರಕಾರಿ, ಹಾಲಿನವ, ಬಟ್ಟೆ ಇಸ್ತ್ರಿ ಮಾಡಿಕೊಡುವವರಿಗೆ ಹತ್ತಿಪ್ಪತ್ತು, ನೂರು, ನೂರ ಐವತ್ತು, ಚಿಲ್ಲರೆ ಹೊಂದಿಸುವುದಾದರೂ ಎಲ್ಲಿ ಎಂದು ಗೊಣಗುತ್ತಲೇ ಹೊರ ಬಂದೆ.
ಈಗ ಮಿತ್ರೋ ಎಂದು ಬದಲಾಗಿರುವ ಭಾಹಿಯೊ, ಬೆಹನೊ... ಭಾಷಣದ ವರಸೆ ಮತ್ತು ಆರ್‌ಬಿಐನ ಮುಗಿಯದ ನೋಟುಗಳ ಎಣಿಕೆ ಮಧ್ಯೆ ಸಾಕಷ್ಟು ಹಳೆಯ ಹೊಸ ನೋಟುಗಳು ಕೈಬದಲಾಯಿಸಿವೆ. ಕೆಲ ಪ್ರಮಾಣದ ಕಪ್ಪು ಹಣ ಹೊರ ಬಂದಿದೆ. ತೆರಿಗೆ ಪಾವತಿ ಪ್ರಮಾಣ ಹೆಚ್ಚಿದೆ. ಡಿಜಿಟಲ್ ವಹಿವಾಟಿಗೆ ಕೊಂಚ ವೇಗ ಸಿಕ್ಕಿದೆ. ಇದನ್ನಿಷ್ಟು ಸಾಧಿಸಲು ಜನರ ಬದುಕಿಗೆ, ದೇಶದ ಆರ್ಥಿಕತೆಗೆ ಸಂಕಷ್ಟ ತಂದೊಡ್ಡುವ ಅಗತ್ಯ ಇತ್ತೇ. ಇದರಿಂದ ಯಾವ ಪುರುಷಾರ್ಥ ಸಾಧಿಸಲಾಯಿತು ಎನ್ನುವ ಪ್ರಶ್ನೆಗಳಿಗೆ ಈಗಲೂ ಸಮಾಧಾನಕರ ಉತ್ತರ ಸಿಗದೆ ಉಳಿದುಕೊಂಡಿವೆ.
*
ಮುಂದುವರೆದ ದೇಶಗಳ ಜತೆ ಸ್ಪರ್ಧಿಸಲು ಕಡಿಮೆ ನಗದು ಬಳಕೆ ಮತ್ತು ನಗದುರಹಿತ ಸಮಾಜ ನಿರ್ಮಾಣಗೊಳ್ಳುವುದು ಸದ್ಯದ ಅಗತ್ಯವಾಗಿದೆ
ಉಪಾಸನಾ ಟಕು, ಮೊಬಿಕ್ವಿಕ್ ಸಹ ಸ್ಥಾಪಕಿ
*
ಲೆಕ್ಕಕ್ಕೆ ಸಿಗದ ಹಣವನ್ನು ವ್ಯವಸ್ಥೆ ವ್ಯಾಪ್ತಿಗೆ ತರುವ ಮತ್ತು ತೆರಿಗೆ ಪಾವತಿ ಹೆಚ್ಚಿಸುವ ಉದ್ದೇಶವು ಆರ್ಥಿಕತೆ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತಿದೆ
ಆಶೀಶ್ ಕುಮಾರ್ ಚೌಹಾಣ್, ಬಿಎಸ್‌ಇ ಸಿಇಒ
***
ನೋಟು ರದ್ದತಿ ನಿರ್ಧಾರ ಈಗ ಒಂದು ಸುತ್ತು ಪೂರ್ಣಗೊಳಿಸಿದೆ, ಭವಿಷ್ಯದಲ್ಲಿ ರಿಯಲ್ ಎಸ್ಟೇಟ್ ವಲಯಕ್ಕೆ ಉತ್ತಮ ದಿನಗಳು ಕಾದಿವೆ ಎಂದು ಆಶಿಸುವೆ
ಶಿಶಿರ್ ಬೈಜಲ್, ನೈಟ್ ಫ್ರ್ಯಾಂಕ್ ಇಂಡಿಯಾ ಅಧ್ಯಕ್ಷ
Comments
Post a Comment